ಅಥವಾ

ಒಟ್ಟು 203 ಕಡೆಗಳಲ್ಲಿ , 12 ವಚನಕಾರರು , 163 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯ, ಶರಣಸತಿ-ಲಿಂಗಪತಿ ಭಾವದಿಂದ ಸುಚಿತ್ತ, ಸುಬುದ್ಧಿ, ನಿರಹಂಕಾರ, ಸುಮನ, ಸುಜ್ಞಾನ, ಸದ್ಭಾವ, ನಿರುಪಾದ್ಥಿಕ, ನಿಷ್ಕಳಂಕ, ನಿರಾಳವೆಂಬ ನವವಿಧ ಹಸ್ತಗಳಿಂದ ನವವಿಧ ಪದಾರ್ಥವನ್ನು ಇಷ್ಟಲಿಂಗ-ಪ್ರಾಣಲಿಂಗ-ಭಾವಲಿಂಗ- ಆಚಾರಲಿಂಗ-ಗುರುಲಿಂಗ-ಶಿವಲಿಂಗ-ಜಂಗಮಲಿಂಗ ಪ್ರಸಾದಲಿಂಗ-ಮಹಾಲಿಂಗವೆಂಬ ನವವಿಧಲಿಂಗಗಳಿಗೆ ಶ್ರದ್ಧಾಭಕ್ತಿ ಮೊದಲಾಗಿ ನವವಿಧ ಭಕ್ತಿಗಳಿಂದ ಸಮರ್ಪಿಸುವ ಕ್ರಮವೆಂತೆಂದಡೆ : ತನುಸಂಬಂಧವಾದ ರೂಪುಪದಾರ್ಥವನ್ನು ಇಷ್ಟಲಿಂಗಕ್ಕೆ ಸಮರ್ಪಿಸಿ, ಮನಸಂಬಂಧವಾದ ರುಚಿಪದಾರ್ಥವನ್ನು ಪ್ರಾಣಲಿಂಗಕ್ಕೆ ಸಮರ್ಪಿಸಿ, ಧನಸಂಬಂಧವಾದ ತೃಪ್ತಿ ಪದಾರ್ಥವನ್ನು ಭಾವಲಿಂಗಕ್ಕೆ ಸಮರ್ಪಿಸಿ, ಸುಗಂಧಪದಾರ್ಥವನ್ನು ಆಚಾರಲಿಂಗಕ್ಕೆ ಸಮರ್ಪಿಸಿ, ಸುರಸಪದಾರ್ಥವನ್ನು ಗುರುಲಿಂಗಕ್ಕೆ ಸಮರ್ಪಿಸಿ, ಸುರೂಪುಪದಾರ್ಥವನ್ನು ಶಿವಲಿಂಗಕ್ಕೆ ಸಮರ್ಪಿಸಿ, ಸ್ಪರ್ಶನಪದಾರ್ಥವನ್ನು ಜಂಗಮಲಿಂಗಕ್ಕೆ ಸಮರ್ಪಿಸಿ, ಸುಶಬ್ದಪದಾರ್ಥವನ್ನು ಪ್ರಸಾದಲಿಂಗಕ್ಕೆ ಸಮರ್ಪಿಸಿ, ಸುತೃಪ್ತಿಪದಾರ್ಥವನ್ನು ಮಹಾಲಿಂಗಕ್ಕೆ ಸಮರ್ಪಿಸಿ, ಘ್ರಾಣ, ಚಿಹ್ನೆ, ನೇತ್ರ, ತ್ವಕ್ಕು, ಶ್ರೋತ್ರ, ಹೃದಯಂಗಳು ಮೊದಲಾದ ಸಮಸ್ತ ಮುಖಂಗಳಲ್ಲಿ ಬರುವ ಪದಾರ್ಥಂಗಳ ಸಮಸ್ತಲಿಂಗಂಗಳಿಗೆ ಮಿಶ್ರಾಮಿಶ್ರಂಗಳೊಡನೆ ಸಮರ್ಪಿಸಿ, ಆ ಲಿಂಗಂಗಳ ಸಂತೃಪ್ತಿ ಪರಿಣಾಮಪ್ರಸಾದದಲ್ಲಿ ಲೋಲುಪ್ತವಾಗಿರುವಂಥಾದೆ ಪಂಚೇಂದ್ರಿಯಾರ್ಪಿತದೀಕ್ಷೆ. ಇಂತುಟೆಂದು ಶ್ರೀಗುರು ನಿಷ್ಕಳಂಕ ನಿಷ್ಪ್ರಪಂಚ ನಿರಾಲಂಬ ಚನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯ ತತ್ತ್ವ ವಿತತ್ತ್ವಗಳಿಲ್ಲದಂದು, ಪ್ರಕೃತಿ ಪುರುಷರಿಲ್ಲದಂದು, ಜೀವ_ಪರಮರೆಂಬ ಭಾವ ತಲೆದೋರದಂದು, ಏನೂ ಏನೂ ಇಲ್ಲದಂದು ಬಯಲು ಬಲಿದು ಒಂದು ಬಿಂದುವಾಯಿತ್ತು ನೋಡಾ. ಆ ಬಿಂದು ಅಕ್ಷರತ್ರಯದ ಗದ್ದುಗೆಯಲ್ಲಿ ಕುಳ್ಳಿರಲು ಓಂಕಾರ ಉತ್ಪತ್ತಿಯಾಯಿತ್ತು. ಆ [ಓಂಕಾರದ] ನಾದದಲ್ಲಿ ಮೂರ್ತಿಗೊಂಡನೊಬ್ಬ ಶರಣ. ಆ ಶರಣನಿಂದಾಯಿತ್ತು ಪ್ರಕೃತಿ, ಆ ಪ್ರಕೃತಿಯಿಂದಾಯಿತ್ತು ಲೋಕ. ಈ ಲೋಕ ಲೌಕಿಕವನತಿಗಳೆದು ನಿಜದಲ್ಲಿ ನಿವಾಸಿಯಾಗಿಪ್ಪ, ಗುಹೇಶ್ವರನ ಶರಣ ಚೆನ್ನಬಸವಣ್ಣನ ಘನವನು ಬಸವಣ್ಣನ ಕೃಪೆಯಿಂದಲರಿದು ನಮೋ ನಮೋ ಎನುತಿರ್ದೆನು.
--------------
ಅಲ್ಲಮಪ್ರಭುದೇವರು
ಅಯ್ಯ, ಇಂತು ಕಲ್ಯಾಣಪಟ್ಟಣದ ಅನುಭಾವಮಂಟಪದ ಶೂನ್ಯಸಿಂಹಾಸನದಲ್ಲಿ ಪ್ರಭುಸ್ವಾಮಿಗಳು ಬಸವರಾಜೇಂದ್ರ ಮುಖ್ಯವಾದ ಸಕಲಪ್ರಮಥಗಣಂಗಳು ಕೂಡಿ, ಚಿಕ್ಕದಂಡನಾಯಕ ಮುಖವಚನದಿಂದೆ ಶಿವಯೋಗಿ ಸಿದ್ಧರಾಮೇಶ್ವರನ ಉಪದೇಶಕಾರಣಾರ್ಥವಾಗಿ, ನವರತ್ನ ಖಚಿತ ಮಂಟಪವ ರಚಿಸಿ, ಶುಚಿ, ರುಚಿ, ಪರುಷ, ನಿಜ, ಸದ್ಭಕ್ತಿ, ಜ್ಞಾನ, ವೈರಾಗ್ಯ, ಸತ್ಕ್ರಿಯಾಚಾರ ಷಟ್ಸ್ಥಲಮಾರ್ಗವ ಚೆನ್ನಬಸವಣ್ಣನ ಮುಖವಚನದಿಂದೆ ಸಿದ್ಧರಾಮದೇಶಿಕೇಂದ್ರನಿಗೆ ಬೋದ್ಥಿಸಿದ ನಿಲುಕಡೆಯ ಸೂತ್ರವದೆಂತೆಂದಡೆ : ಅಯ್ಯ, ಮೂವತ್ತಾರು ತತ್ವಂಗಳಲ್ಲಿ ಸಂಬಂಧವಾದ ಅಷ್ಟಾವರಣಂಗಳ ಕೂಡಿ ನಾಲ್ವತ್ತುನಾಲ್ಕು ಚಿದಂಗತತ್ವಂಗಳೆಂದೆನಿಸಿ, ಅಯ್ಯ, ಇಷ್ಟಲಿಂಗಜಪಪ್ರದಕ್ಷಿಣ ಪ್ರಣಮ ಹತ್ತೊಂಬತ್ತು, ಪ್ರಾಣಲಿಂಗಜಪಪ್ರದಕ್ಷಿಣ ಪ್ರಣಮ ಹತ್ತೊಂಬತ್ತು, ಭಾವಲಿಂಗಜಪಪ್ರದಕ್ಷಿಣ ಪ್ರಣಮ ಹತ್ತೊಂಬತ್ತು ಕೂಡಲಾಗಿ ಐವತ್ತೇಳು ಮಹಾಪ್ರಣಮಂಗಳೆ ಚಿದ್ಛನಲಿಂಗಸ್ಥಲಂಗಳಾಗಿ ಶೋಬ್ಥಿಸುವಂಥ ಚಿದಂಗ-ಚಿದ್ಘನಲಿಂಗವ ಉಭಯಭಾವವಳಿದು ನೂರೊಂದುಸ್ಥಲವ ಸಂಬಂಧವಮಾಡಿ, ಮಾರ್ಗಾಚರಣೆಯ ಕುರುಹ ತೋರಿ, ಅಂತರಂಗದಲ್ಲಿ ಶೋಬ್ಥಿಸುವ ಲೋಮವಿಲೋಮದಳಂಗಳೆ ನೂರೆಂಟು ತೆರದ ಚಿದಂಗಂಗಳಾಗಿ, ಆ ದಳಂಗಳಲ್ಲಿ ಝಗಝಗಾಯಮಾನವಾಗಿ ಪ್ರಕಾಶಿಸುವ ಪ್ರಣಮಂಗಳೆ ನೂರೆಂಟು ತೆರದ ಚಿದ್ಘನಲಿಂಗಂಗಳಾಗಿ, ಒಳಗು-ಹೊರಗು ಎಂಬ ಉಭಯ ನಾಮ ರೂಪು ಕ್ರಿಯವನಳಿದು ಇನ್ನೂರ ಹದಿನಾರು ಸ್ಥಲವ ಸಂಬಂಧವ ಮಾಡಿ ಮೀರಿದ ಕ್ರಿಯಾಚರಣೆಯ ಕುರುಹ ತೋರಿ ಅನಾದ್ಥಿಗುರು ಬಸವರಾಜೇಂದ್ರನ ಪ್ರಸಿದ್ಧಪ್ರಸಾದನೆ ಮಾರ್ಗಕ್ರಿಯಾರೂಪವಾದ ನೂರೊಂದು ಸ್ಥಲಂಗಳಾಗಿ, ಅನಾದಿಜಂಗಮ ಪ್ರಭುರಾಜೇಂದ್ರನ ಶುದ್ಧಪ್ರಸಾದವೆ ಮೀರಿದ ಕ್ರಿಯಾರೂಪವಾದ ಇನ್ನೂರ ಹದಿನಾರುಸ್ಥಲಂಗಳಾಗಿ, ಇವರಿಬ್ಬರ ಮಹಾಪ್ರಸಾದವೆ ಘಟ್ಟಿಗೊಂಡು ಅನಾದಿಶರಣರೂಪವ ತಾಳಿ ಚೆನ್ನಬಸವಣ್ಣನೆಂಬಬ್ಥಿಧಾನದಿಂದ ಮಾರ್ಗಕ್ರಿಯಾಸ್ವರೂಪ ನೂರೊಂದುಸ್ಥಲವೆ ಆಚರಣೆಯಾಗಿ ಮೀರಿದ ಕ್ರಿಯಾಸ್ವರೂಪ ಇನ್ನೂರ ಹದಿನಾರುಸ್ಥಲವೆ ಸಂಬಂಧವಾಗಿ ಅನಾದಿಪರಶಿವರೂಪ ಶಿವಯೋಗಿಸಿದ್ಧರಾಮನ ಕರ-ಮನ-ಭಾವಂಗಳಲ್ಲಿ ಮಿಶ್ರಾಮಿಶ್ರಂಗಳೊಡನೆ ಅಗಣಿತ ಸೂರ್ಯಚಂದ್ರಾಗ್ನಿ ಪ್ರಕಾಶಕ್ಕೆ ಮಿಗಿಲಾಗಿ ತ್ಯಾಗ-ಭೋಗ-ಯೋಗಾನುಸಂಧಾನದಿಂದ ಸಿದ್ಧರಾಮನ ಕರಸ್ಥಲದಲ್ಲಿ ಶುದ್ಧಪ್ರಸಾದ-ಇಷ್ಟಲಿಂಗವಾಗಿ ಅಷ್ಟವಿಧಾರ್ಚನೆ-ಷೋಡಶೋಪಚಾರವ ಕೈಕೊಂಡು ಒಪ್ಪುತ್ತಿರ್ಪರು ನೋಡ. ಮನಸ್ಥಲದಲ್ಲಿ ಸಿದ್ಧಪ್ರಸಾದ-ಪ್ರಾಣಲಿಂಗವಾಗಿ ಮಂತ್ರ-ಧ್ಯಾನ-ಜಪ-ಸ್ತೋತ್ರಂಗಳ ಕೈಕೊಂಡು ಒಪ್ಪುತ್ತಿರ್ಪರು ನೋಡ. ಭಾವಸ್ಥಲದಲ್ಲಿ ಪ್ರಸಿದ್ಧಪ್ರಸಾದ-ಭಾವಲಿಂಗವಾಗಿ ಮನೋರ್ಲಯ ನಿರಂಜನ ಪೂಜಾಕ್ರಿಯಾನಂದ ಕೂಟವ ಕೈಕೊಂಡು ಒಪ್ಪುತ್ತಿರ್ಪರು ನೋಡ. ಇಂತು ಸಂಬಂಧಾಚರಣೆಯ ಸ್ಥಲಕುಳಂಗಳ ಚಿದ್ಬೆಳಗಿನಲ್ಲಿ ಶೋಬ್ಥಿಸುವ ಬಸವಣ್ಣ, ಚೆನ್ನಬಸವಣ್ಣ, ಪ್ರಭು, ಸಿದ್ಧರಾಮ ಪ್ರಮಥಗಣಂಗಳ ಮಹಾಪ್ರಸಾದ ಬೆಳಗಿಗೆ ಯೋಗ್ಯರಾಗಿ ದಗ್ಧಪಟನ್ಯಾಯ, ಉರಿವುಂಡ ಕರ್ಪೂರದಂತಾದೆವು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಷ್ಟವಿಧಾರ್ಚನೆ ಷೋಡಶೋಪಚಾರವಲ್ಲದೆ ನಿಮ್ಮ ಮುಟ್ಟಲರಿಯದರ ಕಂಡಡೆ, ಅಯ್ಯ ಎಂತೆಂಬೆನವರ ಆವ ಭಾವದಲ್ಲಿ, ಆವ ಜ್ಞಾನದಲ್ಲಿ, ಆವ ಮುಖದಲ್ಲಿ ಅರಿವವರದಾರಯ್ಯಾ ಏನೆಂಬೆ ನಿಮ್ಮಲ್ಲಿ ಸಮ್ಯಕ್ಕರಾದ ಸತ್ಯಶರಣರ ಕಂಡು, ಕೂಡಲಸಂಗಮದೇವಾ, ಅವರನಯ್ಯ ಎಂಬೆನು.
--------------
ಬಸವಣ್ಣ
ಅಯ್ಯ, ಇಂತು ಶಿಖಿ ಕರ್ಪೂರಸಂಯೋಗದಂತೆ ನಿಜಶಿವಯೋಗಾಚರನುಸಂಧಾನವ ಕಪಿಲಸಿದ್ಧಮಲ್ಲಿಕಾರ್ಜುನಲಿಂಗದೊಡನೆ ಚನ್ನಬಸವ ಪ್ರಮಥಗಣಸಾಕ್ಷಿಯಿಂದ ಮಹಾಪ್ರಭುಸ್ವಾಮಿಗಳ ಕರುಣಕಟಾಕ್ಷೆಯಿಂದ ಬೆಸಗೊಂಡು ಸರ್ವಾಂಗಲಿಂಗಸಂದಾನದಿಂದ ಬೆರದು ಬಯಲಾದರು ಸಿದ್ಧರಾಮದೇಶಿಕೇಂದ್ರನು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯ, ಸತ್ತುಚಿತ್ತಾನಂದ ನಿತ್ಯ ಪರಿಪೂರ್ಣ ಅವಿರಳ ಪರಂಜ್ಯೋತಿ ಸ್ವರೂಪ ಪರಮಾರಾಧ್ಯ ವೀರಶೈವಾಚಾರ ಷಟ್ಸ್ಥಲ ಪ್ರತಿಪಾದಕ ಶ್ರೀಗುರುಲಿಂಗಜಂಗಮದ ಕರುಣಕಟಾಕ್ಷೆಯಿಂದ ಅಂಗ-ಮನ-ಭಾವಗಳೆಲ್ಲ ಶುದ್ಧಸಿದ್ಧಪ್ರಸಿದ್ಧಪ್ರಸಾದದ ಸ್ವರೂಪವಾದ ಇಷ್ಟ ಪ್ರಾಣ ಭಾವಲಿಂಗವಾದ ಮೇಲೆ ಭೃಂಗ ಕೀಡಿಯೋಪಾದಿಯಲ್ಲಿ ಗುರುಲಿಂಗಜಂಗಮ ಬೇರೆ, ನಾ ಬೇರೆಂಬ ಬ್ಥಿನ್ನಭೇದವನಳಿದು ಗುರುಮಾರ್ಗಾಚಾರದಲ್ಲಿ ಪ್ರೇಮವುಳ್ಳಾತನಾಗಿ ಜ್ಞಾತೃ-ಜ್ಞಾನ-ಜ್ಞೇಯವೆಂಬ ಅಷ್ಟಾಂಗಯೋಗಭ್ರಮಿತರ ಜಡಕರ್ಮ ಶೈವಮಾರ್ಗದಲ್ಲಿ ಸಾಕ್ಷಾತ್ ಶಿವನೆ ಇಷ್ಟಲಿಂಗಧಾರಕನಾಗಿ, ಗುರುರೂಪ ಧರಿಸಿ, ಶಿವಭಕ್ತಮಾರ್ಗವ ತೋರದೆ ಇಚ್ಛೆಯ ನುಡಿದು, ಉದರವ ಹೊರೆವ ವೇಷವ ಕಂಡು, ಶರಣೆಂದು ಮನ್ನಣೆಯ ಕೊಡದೆ, ಭೂತಸೋಂಕಿದ ಮನುಜನೋಪಾದಿಯಲ್ಲಿ ತನ್ನ ಪವಿತ್ರ ಸ್ವರೂಪ ಪರತತ್ವಮೂರ್ತಿಧ್ಯಾನದಿಂದ ಚಿದ್ಘನಲಿಂಗದೊಳಗೆ ತಾನಾಗಿ, ತನ್ನೊಳಗೆ ಚಿದ್ಘನಲಿಂಗವಾಗಿ, ಸಪ್ತಧಾತು, ಸಪ್ತವ್ಯಸನಂಗಳಲ್ಲಿ ಕೂಡದೆ ಲಿಂಗವೆ ತಾನಾದ ಸ್ವಸ್ವರೂಪು ನಿಲುಕಡೆಯ ಲಿಂಗನಿಷ್ಠದೀಕ್ಷೆ. ಇಂತುಟೆಂದು ಶ್ರೀಗುರುಲಿಂಗಜಂಗಮಸ್ವರೂಪ ನಿಷ್ಕಳಂಕಮೂರ್ತಿ ಚನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯ, ಪರಮ ಪತಿವ್ರತೆಗೆ ಹರಗಣ ಸಾಕ್ಷಿಯಾಗಿ ಕಂಕಣದ ಕಟ್ಟಿದ ಪುರುಷಂಗೆ ತನ್ನ ತನುಮನವ ಮೀಸಲ ಮಾಡಿ, ತನ್ನ ಪಿತ-ಮಾತೆ-ಪುತ್ರ-ಮಿತ್ರರ ಸಂಗವ ಸೋಂಕದೆ, ಅವರೊಡವೆಗಿಚ್ಛೈಸಿ ನಡೆನುಡಿಗಳಾಲಿಸದೆ, ತನ್ನ ರಮಣನ ದ್ರವ್ಯಾಭರಣವ ಹಾರೈಸಿ, ಆತನ ನುಡಿಯೆ ಮಹಾಪ್ರಸಾದವೆಂದು ಪ್ರತಿನುಡಿಯ ನುಡಿಯದೆ, ಸರ್ವಾವಸ್ಥೆಯಲ್ಲಿ ಆ ರಮಣನ ರತಿಸಂಯೋಗಾನುಸಂಧಾನದಿಂದ ಎರಡಳಿದಿರುವ ಸತ್ಯಾಂಗನೆಯಂತೆ ಶ್ರೀ ಗುರುವಿನ ಕರಗರ್ಭಮಧ್ಯದಲ್ಲಿ ಜನಿತವಾದ ಲಿಂಗಭಕ್ತಗಣ ಸತಿ ಸುತ ಪಿತ ಮಾತೆ ಬಂಧು ಬಳಗ ಒಡಹುಟ್ಟಿದವರು ಮೊದಲಾಗಿ ಪರಶಿವಲಿಂಗ ಜಂಗಮತೀರ್ಥಪ್ರಸಾದ ಮಂತ್ರದಲ್ಲಿ ಮುಳುಗಿ, ಲೋಕದ ಶೈವಮಾರ್ಗಿಗಳಂತೆ ಹಲವು ಕ್ಷೇತ್ರ, ಹಲವು ತೀರ್ಥ, ಹಲವು ನೇಮ ವ್ರತಗಳಿಗೆ ಅಡಿಯಿಡದೆ ವಾಚಕ-ಮಾನಸ-ಕಾಯಕ ಮೊದಲಾದ ಸಮಸ್ತತತ್ವಂಗಳ ಸ್ವಪಾಕವ ಮಾಡಿ ನಿಷ್ಕಳಂಕ ಪರಶಿವಲಿಂಗಜಂಗಮಕ್ಕೆ ಸಮರ್ಪಿಸಿ, ಅವರೊಕ್ಕುಮಿಕ್ಕ ಹರುಷಾನಂದ ಮಹಾಪ್ರಸಾದದಲ್ಲಿ ಸಂತೃಪ್ತನಾಗಿ, ಇಷ್ಟಲಿಂಗಬಾಹ್ಯವಾದ ಜಡಶೈವ ನಡೆನುಡಿಗಳ ಆಲಿಸದಿಪ್ಪುದೆ ಏಕಾಗ್ರಚಿತ್ತದೀಕ್ಷೆ. ಇಂತುಟೆಂದು ಶ್ರೀಗುರು ನಿಷ್ಕಳಂಕ ಟ್ಸ್ಥಲನಾಯಕ ಚನ್ನಬಸವರಾಜೇಂದ್ರನು ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ನೂಲೆಳೆಯ ತೋರದ ಪಶುವಿಂಗೆ ಮೇರುವೆಯ ತೋರ ಕೆಚ್ಚಲು ನೋಡ ಅಯ್ಯ. ಅದಕ್ಕೆ ಕೋಡೆರಡಿಲ್ಲ ನೋಡಾ. ಅದು ಮೊಲೆಗೊಕ್ಕುಳಹಾಲ ಕರೆವುದು. ಕರೆವಾತಗೆ ಕೈಯಲ್ಲ; ಕುಡಿವಾತಗೆ ಬಾಯಿಲ್ಲ ನೋಡಾ. ಕೈಯಿಲ್ಲದೆ ಕರೆದು ಬಾಯಿಲ್ಲದೆ ಉಂಡು ತೃಪ್ತಿಯಿಲ್ಲದೆ ಪರಿಣಾಮಿಸಬಲ್ಲಾತನಲ್ಲದೆ ಶಿವಶರಣನಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಯ್ಯ ನಿನ್ನ ಅಷ್ಟತನುವಿನ ಮಧ್ಯದಲ್ಲಿ ಆ ಪರಬ್ರಹ್ಮನಿಜವಸ್ತುವೆ ನಿನ್ನ ಪಾವನ ನಿಮಿತ್ಯಾರ್ಥವಾಗಿ ಅಷ್ಟಾವರಣಸ್ವರೂಪಿನದಿಂದ ನೆರದಿರ್ಪುದು ನೋಡ. ಅದರ ವಿಚಾರವೆಂತೆಂದಡೆ : ನಿನ್ನ ಸ್ಥೂಲತನುವಿನ ಮಧ್ಯದಲ್ಲಿ ಅರುಹೆ ಗುರುವಾಗಿ ನೆಲಸಿರ್ಪರು ನೋಡ. ನಿನ್ನ ಸೂಕ್ಷ್ಮತನುವಿನ ಮಧ್ಯದಲ್ಲಿ ಸುಜ್ಞಾನವೆ ಲಿಂಗವಾಗಿ ನೆಲಸಿರ್ಪರು ನೋಡ. ನಿನ್ನ ಕಾರಣತನುವಿನ ಮಧ್ಯದಲ್ಲಿ ಸ್ವಾನುಭಾವಜಂಗಮವಾಗಿ ನೆಲಸಿರ್ಪರು ನೋಡ. ನಿನ್ನ ನಿರ್ಮಲತನುವಿನ ಮಧ್ಯದಲ್ಲಿ ಕರುಣಾಮೃತ ಪಾದೋದಕವಾಗಿ ನೆಲಸಿರ್ಪರು ನೋಡ. ನಿನ್ನ ಆನಂದತನುವಿನ ಮಧ್ಯದಲ್ಲಿ ಕೃಪಾಪ್ರಸಾದವಾಗಿ ನೆಲಸಿರ್ಪರು ನೋಡ. ನಿನ್ನ ಚಿದ್ರೂಪತನುವಿನ ಮಧ್ಯದಲ್ಲಿ ಚಿತ್ಪ್ರಕಾಶಭಸಿತವಾಗಿ ನೆಲಸಿರ್ಪರು ನೋಡ. ನಿನ್ನ ಚಿನ್ಮಯತನುವಿನ ಮಧ್ಯದಲ್ಲಿ ಚಿತ್ಕಾಂತೆ ರುದ್ರಾಕ್ಷಿಯಾಗಿ ನೆಲಸಿರ್ಪರು ನೋಡ. ಇಂತು ನಿನ್ನ ಸರ್ವಾಂಗದಲ್ಲಿ ಅಷ್ಟಾವರಣಸ್ವರೂಪಿನಿಂದ ಪರಾತ್ಪರ ನಿಜವಸ್ತು ನೆರದಿರ್ಪುದು ನೋಡ. ನಿನ್ನ ನಿರ್ಮಾಯಚಿತ್ತ ಮಹಾಜ್ಞಾನ ನಿಜದೃಷ್ಟಿಯಿಂದ ನಿನ್ನ ನೀ ತಿಳಿದು ನೋಡ. ಎಂದು ಗಣಸಾಕ್ಷಿಯಾಗಿ ಶ್ರೀಗುರು ನಿಷ್ಕಳಂಕ ಚೆನ್ನಬಸವರಾಜೇಂದ್ರನು ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ಉಪಮಾದೀಕ್ಷೆ ಇಂತುಂಟೆಂದು ನಿರೂಪಂ ಕೊಡುತ್ತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯ, ವರಕುಮಾರದೇಶಿಕೇಂದ್ರನೆ ಕೇಳಾ, ಚಿದ್ಘನಶರಣ ಪ್ರಸಾದಲಿಂಗವಾಗಿ ನಿಂದ ನಿಜಾಚರಣೆಯ ನಿಲುಕಡೆಯ, ಕಲ್ಯಾಣಪಟ್ಟಣದ ಅನುಭಾವ ಮಂಟಪದ ಶೂನ್ಯಸಿಂಹಾಸನದಲ್ಲಿ, ಬಸವ, ಚೆನ್ನಬಸವ, ಸಿದ್ಧರಾಮ, ಅಕ್ಕಮಹಾದೇವಿ, ನೀಲಲೋಚನೆ ಮೊದಲಾದ ಸಕಲಮಹಾಪ್ರಮಥಗಣಂಗಳೆಲ್ಲ ಮಹಾಪ್ರಭುಸ್ವಾಮಿಗಳಿಗೆ ಅಬ್ಥಿವಂದಿಸಿ ಹಸ್ತಾಂಜಲಿತರಾಗಿ ಎಲೆ ಮಹಾಪ್ರಭುವೆ ನಿನ್ನ ಅನಾದಿ ಷಟ್ಸ್ಥಲ ನಿರಭಾರಿವೀರಶೈವಶರಣನ ನಿಜಾಚರಣೆಯ ನಿಲುಕಡೆಯ ದಯವಿಟ್ಟು ಕರುಣಿಸಬೇಕಯ್ಯ ಮಹಾಗುರುವೆ ಎಂದು ಬೆಸಗೊಂಡಲ್ಲಿ ಆಗ ಮಹಾಪ್ರಭುವು ಲಿಂಗಾಂಗಕ್ಕೆ ಬ್ಥಿನ್ನವಿಲ್ಲದೆ ಹಸ್ತಮಸ್ತಕಸಂಯೋಗವ ಮಾಡಿ, ವೇಧಾ-ಮಂತ್ರ-ಕ್ರಿಯಾದೀಕ್ಷೆಯನಿತ್ತು. ಇಪ್ಪತ್ತೊಂದು ತೆರದ ವಿಚಾರವನರುಪಿ, ನೂರೊಂದುಸ್ಥಲದಾಚರಣೆಯ, ಇನ್ನೂರಹದಿನಾರು ಸ್ಥಲದ ಸಂಬಂಧವ ತೋರಿ, ಸರ್ವಾಚಾರ ಸಂಪತ್ತಿನಾವರಣದ ಸ್ವಸ್ವರೂಪು ನಿಲುಕಡೆಯ ತೋರಿಸಿ, ಸಾಕಾರನಿರಾಕಾರದ ನಿಜದ ನಿಲುಕಡೆಯನರುಪಿ, ನಿಜಶಿವಯೋಗದ ನಿರ್ಣಯದ ಕರಿಣಿಸಿ, ಸತ್ತುಚಿತ್ತಾನಂದ ನಿತ್ಯಪರಿಪೂರ್ಣ ಅವಿರಳಪರಂಜ್ಯೋತಿಸ್ವರೂಪ ತಾವೆಂದರುಪಿದ ನೋಡ. ಇಂತು ಚೆನ್ನಬಸವೇಶ್ವರಸ್ವಾಮಿಗಳು ಬೆಸಗೊಂಡು ತಮ್ಮ ಚಿದಂಗಸ್ವರೂಪರಾದ ಚಿದ್ಘನರಶರಣ ನಿರ್ಲಜ್ಜಶಾಂತಯ್ಯನೆಂಬ ಶಿವಶರಣನ ಮುಖದಲ್ಲಿ ಮೋಳಿಗಯ್ಯ ಮೊದಲಾದ ಸಕಲಪ್ರಮಥರ್ಗೆ ಬೋದ್ಥಿಸಿದರು ನೋಡ. ಅದೇ ಪ್ರಸಾದವನ್ನೆ ನಿರ್ಲಜ್ಜಶಾಂತಯ್ಯನೆಂಬ ದೇಶಿಕೇದ್ರನು ಚಂಗಣಗಿಲಮಂಟಪದ ರೇವಣಸಿದ್ದೇಶ್ವರಂಗೆ ಬೋದ್ಥಿಸಿದರು ನೋಡ. ಅದೇ ಪ್ರಸಾದವನ್ನೆ ರೇವಣಸಿದ್ದೇಶ್ವರನೆಂಬ ದೇಶಿಕೇಂದ್ರನು ಜ್ಞಾನೋದಯರಾಗಿ ತಮ್ಮಡಿಗೆರಗಿ ಬಂದ ಶಿಷ್ಯೋತ್ತಮ ಶಿವಶರಣರ್ಗೆ ಸ್ವಾನುಭಾವಸೂತ್ರವ ಬೋದ್ಥಿಸುತ್ತಿರ್ದರು ನೋಡ. ಅದೇ ಮಹಾಪ್ರಸಾದವ ನಿನ್ನ ಶ್ರೋತ್ರಮುಖದಲ್ಲಿ ಮಹಾಮಂತ್ರಮೂರ್ತಿಯಾಗಿ ನೆಲೆಗೊಂಡಿರ್ಪ ಪ್ರಸಾದಲಿಂಗಮುಖದಲ್ಲಿ ಅರುಹಿಸಿ ಕೊಟ್ಟೇವು ಕೇಳಿ, ಮಹಾಲಿಂಗಮುಖದಲ್ಲಿ ಸಂತೃಪ್ತನಾಗಿ, ಪರಿಣಾಮಪ್ರಸಾದದಲ್ಲಿ ಲೋಲುಪ್ತನಾಗಿ, ಎನ್ನ ಜ್ಞಾನಮಂಟಪದಲ್ಲಿ ಮೂರ್ತಿಗೊಂಡಿರುವ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯ ! ಸಮಸ್ತಧಾನ್ಯಾದಿಗಳಲ್ಲಿ, ಸಮಸ್ತ ಫಲಾದಿಗಳಲ್ಲಿ, ಸಮಸ್ತಪುಷ್ಪಪತ್ರಾದಿಗಳಲ್ಲಿ ಮಧುರ, ಒಗರು, ಕ್ಷಾರ, ಆಮ್ಲ, ಕಹಿ, ಲವಣ ಮೊದಲಾದ ಸಮಸ್ತಪರಮಚಿದ್ರಸವಡಗಿರ್ಪಂತೆ, ಷೋಡಶಮದಗಜದಂತರಂಗದ ಮಧ್ಯದಲ್ಲಿ ಸಮಸ್ತ ವೈರಾಗ್ಯ, ತಿರಸ್ಕಾರಸ್ವರೂಪ ಮಹಾ [ಅ]ಜ್ಞಾನವಡಗಿರ್ಪಂತೆ, ಚಂದ್ರಕಾಂತದ ಶಿಲಾಮಧ್ಯದಲ್ಲಿ ಚಿಜ್ಜಲವಡಗಿರ್ಪಂತೆ, ಶಿಶುಗಳು `ಕಂಡ ಕನಸು' ತಂದೆ ತಾಯಿಗಳಿಗೆ ಕಾಣಿಸಿದಂತೆ, ಕರವೀರ, ಸುರಹೊನ್ನೆ, ಜಾಜಿ, ಬಕುಳ, ಪಾದರಿ, ಪಾರಿಜಾತ, ಮೊಲ್ಲೆ, ಮಲ್ಲಿಗೆ, ತಾವರೆ, ನೈದಿಲೆ, ಸಂಪಿಗೆ, ದವನ, ಪಚ್ಚೆ, ಕಸ್ತೂರಿ, ಮರುಗ, ಬಿಲ್ವ ಮೊದಲಾದ ಪುಷ್ಪ ಪತ್ರಾದಿಗಳಲ್ಲಿ ಮಹಾಸದ್ವಾಸನಾ ಸ್ವರೂಪವಾದ ಪರಿಮಳವಡಗಿರ್ಪಂತೆ, ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ, ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯವೆಂಬ ದಶವಾಯುಗಳ ಮಧ್ಯದಲ್ಲಿ ಭ್ರಮರನಾದ, ವೀಣಾನಾದ, ಘಂಟಾನಾದ, ಭೇರಿನಾದ, ಮೇಘನಾದ, ಪ್ರಣಮನಾದ, ದಿವ್ಯನಾದ, ಸಿಂಹನಾದ, ಶರಭನಾದ, ಮಹಾನಾದಂಗಳಡಗಿರ್ಪಂತೆ, ಸದ್ಭಕ್ತ ಶಿವಶರಣಗಣಂಗಳ ಮಧ್ಯದಲ್ಲಿ ಅಡಗಿರ್ದು, ಜಗದ ಜಡಜೀವರಿಗೆ ಗೋಚರವಿಲ್ಲದಿರ್ಪುದು ನೋಡ ! ಗುಹೇಶ್ವರಲಿಂಗವು, ಚೆನ್ನಬಸವಣ್ಣ
--------------
ಅಲ್ಲಮಪ್ರಭುದೇವರು
ಅಯ್ಯ, ನಿಃಶೂನ್ಯಾಕೃತಿ, ಕ್ಷಕಾರ ಪ್ರಣಮ, ದಿವ್ಯನಾದ, ಶಿಖಾಚಕ್ರ, ಮಹಾಜ್ಯೋತಿವರ್ಣ, ನಿರಾಲಂಬಸ್ಥಲ, ಚಿನುಮಯ ತನು, ನಿರಾಳ ಹಸ್ತ, ಶೂನ್ಯಲಿಂಗ, ಉನ್ಮನಿಮುಖ, ನಿರಹಂಕಾರ ಭಕ್ತಿ, ಪರಿಪೂರ್ಣಪದಾರ್ಥ, ಪರಿಪೂರ್ಣಪ್ರಸಾದ, ಪರಶಿವ ಪೂಜಾರಿ, ಪರಶಿವನದ್ಥಿದೇವತೆ, ಅವಿರಳ ಸಾದಾಖ್ಯ, ಆಗಮವೆಂಬ ಲಕ್ಷಣ, ನಿರ್ಮಾಯವೆಂಬ ಸಂಜ್ಞೆ, ದಿವ್ಯನಾದ, ಘೋಷದಿಕ್ಕು, ಮನೋರ್ಲಯ ವೇದ, ಚಿಚ್ಚಂದ್ರನೆ ಅಂಗ, ದಿವ್ಯಾತ್ಮ, ನಿಭ್ರಾಂತಿ ಶಕ್ತಿ ಅನಂತಕಲೆ ಇಂತು ಇಪ್ಪತ್ತುನಾಲ್ಕು ಸಂಕೀಲಂಗಳನೊಳಕೊಂಡು ಎನ್ನ ಶಿಖಾಚಕ್ರವೆಂಬ ಹೇಮಾದ್ರಿಪರ್ವತಕ್ಷೇತ್ರದಲ್ಲಿ ಮೂರ್ತಿಗೊಂಡಿರ್ದ ಶಿವಮಂತ್ರ ಶಿಕ್ಷಾಕರ್ತೃಸ್ವರೂಪವಾದ ಶೂನ್ಯಲಿಂಗವೆ ಹಿರಣ್ಯೇಶ್ವರಲಿಂಗವೆಂದು ಕರಣತ್ರಯವ ಮಡಿಮಾಡಿ, ಅನುಪಮವೆಂಬ ಜಲದಿಂ ಮಜ್ಜನಕ್ಕೆರದು, ಚಂದ್ರ ನಿವೃತ್ತಿಯಾದ ಗಂಧವ ಧರಿಸಿ, ವಿರಳ ಅವಿರಳವಾದಕ್ಷತೆಯನಿಟ್ಟು, ಅಲ್ಲಿಹ ತ್ರಿದಳಂಗಳನೆ ಪುಷ್ಪದ ಮಾಲೆಯೆಂದು ಧರಿಸಿ, ಅಲ್ಲಿಹ ಕಮಲಸದ್ವಾಸನೆಯ ಧೂಪವ ಬೀಸಿ, ಅಲ್ಲಿಹ ಮಹಾಜ್ಯೋತಿವರ್ಣವೆ ಕರ್ಪೂರದ ಜ್ಯೋತಿಯೆಂದು ಬೆಳಗಿ, ಅಲ್ಲಿಹ ನಿಃಸಂಸಾರಾವಸ್ಥೆಯೆಂಬ ನವೀನ ವಸ್ತ್ರವ ಹೊದ್ದಿಸಿ, ಸದಾನಂದವೆಂಬಾಭರಣವ ತೊಡಿಸಿ, ಪರಿಪೂರ್ಣವೆಂಬ ನೈವೇದ್ಯವನರ್ಪಿಸಿ, ನಿರಹಂಕಾರವೆಂಬ ತಾಂಬೂಲವನಿತ್ತು, ಇಂತು ಶೂನ್ಯಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡಿ, ಶತಕೋಟಿ ಸೂರ್ಯನ ಪ್ರಭೆಯಂತೆ ಬೆಳಗುವ ಶೂನ್ಯಲಿಂಗವನ್ನು ಕಂಗಳು ತುಂಬಿ ನೋಡಿ, ಮನದಲ್ಲಿ ಸಂತೋಷಂಗೊಂಡು, ಆ ಶೂನ್ಯಲಿಂಗವ ಪೂಜೆಯ ಸಮಾಪ್ತವ ಮಾಡಿ, ಜ್ಞಾನ ಜಪವೆಂಬ ದ್ವಾದಶ ಪ್ರಣಮ ಮಂತ್ರಗಳಿಂದೆ ನಮಸ್ಕರಿಸಿ, ಆ ಶೂನ್ಯಲಿಂಗದ ತಾನೆಂದರಿದು, ಕೂಡಿ ಎರಡಳಿದು ನಿಸ್ಸಂಸಾರಿಯಾಗಿ ಆಚರಿಸಬಲ್ಲಾತನೆ ನಿರಹಂಕಾರ ಭಕ್ತಿಯನುಳ್ಳ ನಿರಾತಂಕ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಸೂಕ್ಷ ್ಮನೈ ನೀನು. ಲೋಕವೀರೇಳರ ಧಾರಣೆ ರೋಮಾಂತ್ಯದಲ್ಲಿ ಬಹಳವಪ್ಪನ ಅಯ್ಯ ನಿಮ್ಮ ಸೂಕ್ಷ ್ಮಮಂ ಮಾಡಿ ಇತ್ತ ಗುರು ಚೆನ್ನಬಸವಣ್ಣನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಅಯ್ಯ ಸದಾಚಾರಸದ್ಭಕ್ತಿಯಿಲ್ಲದ ಗುರುವು ನರಜೀವಿ. ಆತನಿಂದ ಹುಟ್ಟಿದ ಲಿಂಗಾಂಗವೆರಡು ಜಡಜೀವಿ. ಅವರಿಬ್ಬರಲ್ಲಿ ಹೊಕ್ಕು ಕೊಟ್ಟು ಕೊಂಬುವ ಜಂಗಮ ಭೂತಪ್ರಾಣಿ. ಈ ನರಜೀವಿ, ಜಡಜೀವಿ, ಭೂತಪ್ರಾಣಿಗಳಿಗೆ ಕೊಟ್ಟುಕೊಂಬ ಭಕ್ತಂಗೆ ಏಳನೆಯ ಪಾತಕ ಬಿಡದು ಕಾಣಾ. ಗುಹೇಶ್ವರಲಿಂಗದ ಸದಾಚಾರಸದ್ಭಕ್ತಿಯಿಂದಲ್ಲದೆ ಮುಕ್ತಿಯಿಲ್ಲ ನೋಡಾ ಚೆನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಅಯ್ಯ ! ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ, ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯವೆಂಬ ದಶವಾಯು ಪ್ರಾಣಗುಣಂಗಳ ನಷ್ಟವ ಮಾಡಿ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾನ್ಯ, ಧಾರಣ, ಸಮಾಧಿಯೆಂಬ ಹಠಯೋಗ ಜಡಶೈವಮಾರ್ಗವನುಳಿದು, ನಿಭ್ರ್ರಾಂತ, ನಿಶ್ಚಿಂತ, ನಿರ್ಗುಣಾನಂದಲೀಲೆಯನರಿದು, ಹಿಂದೆ ಹೇಳಿದ ಸದ್ಭಕ್ತ_ಮಹೇಶ_ಪ್ರಸಾದಿಸ್ಥಲವ ಅಂಗವ ಮಾಡಿಕೊಂಡು ಸರ್ವಾಂಗಲೋಚನಮೂರ್ತಿಯಾಗಿ ಪ್ರಭಾವಿಸುವ ನಿಜಪ್ರಾಣಲಿಂಗಿಯಂತರಂಗದಲ್ಲಿ ಚಿನ್ಮಯ ಸ್ವರೂಪಲೀಲೆಯಿಂ ಸಮಸ್ತ ತತ್ತ್ವಾನುಭಾವವನೊಳಗು ಮಾಡಿಕೊಂಡು ಹದಿನಾಲ್ಕು ಸ್ಥಲಂಗಳ ಗರ್ಭೀಕರಿಸಿಕೊಂಡು ಐದು ಸಾವಿರದ ನೂರ ಎಂಬತ್ತುನಾಲ್ಕು ಮಂತ್ರಮಾಲೆಗಳ ಪಿಡಿದುಕೊಂಡು ಇಪ್ಪತ್ತುನಾಲ್ಕು ಸಕೀಲಗರ್ಭದಿಂ, ಬಂಗಾರ ಲೋಹವನೊಳಕೊಂಡಂತೆ, ತನ್ನ ಸೋಂಕಿದವರೆಲ್ಲ ತನ್ನಂತೆಯೆಂಬ ಗುರುವಚನೋಕ್ತಿಪ್ರಮಾಣದಿಂದೆ ಶಬ್ದದೊಳಗೆ ನಿಃಶಬ್ದವಡಗಿರ್ಪ ಹಾಂಗೆ ಏಕಸ್ವರೂಪಿನಿಂದೆ ಯಜನಸ್ವರೂಪಮೂರ್ತಿ ಜಂಗಮಲಿಂಗವಾಗಿ ನೆಲಸಿರ್ಪುದು ನೋಡ ! ನಿರವಯಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗವು ಚೆನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->