ಅಥವಾ

ಒಟ್ಟು 113 ಕಡೆಗಳಲ್ಲಿ , 1 ವಚನಕಾರರು , 113 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದು ಹುತ್ತಕ್ಕೆ ಒಂಬತ್ತು ಬಾಗಿಲು. ಒಂದು ಸರ್ಪ ಒಂಬತ್ತು ಬಾಗಿಲಲ್ಲಿಯೂ ನೋಡುತ್ತಿಪ್ಪುದು. ಒಂಬತ್ತು ಬಾಗಿಲಿಗೆ ಕದವನಿಕ್ಕಿ, ಒಂದು ಬಾಗಿಲ ಅಗುಳಿ ದಾರವಂದವನಿಕ್ಕಿ ಬಲಿಯಲು, ತಿರುಗುವುದಕ್ಕೆ ಠಾವ ಕಾಣದೆ, ಇರುವುದಕ್ಕೆ ಇಂಬ ಕಾಣದೆ, ನಿಲುವುದಕ್ಕೆ ಎಡೆಯ ಕಾಣದೆ, ಉರಿ ಎದ್ದು ಊರ್ದ್ವಕ್ಕೇರಲು, ಶರಧಿ ಬತ್ತಿತ್ತು, ಅಲ್ಲಿದ್ದ ಖಗಮೃಗವೆಲ್ಲ ದಹನವಾದವು. ಸರೋವರವೆಲ್ಲ ಉರಿದು ಹೋದವು, ಕತ್ತಲೆ ಹರಿಯಿತ್ತು. ಮುಂದೆ ದಿಟ್ಟಿಸಿ ನೋಡುವನ್ನಕ್ಕ ಇಟ್ಟೆಡೆಯ ಬಾಗಿಲು ಸಿಕ್ಕಿತ್ತು. ಆ ಇಟ್ಟೆಡೆಯ ಬಾಗಿಲ ಹೊಕ್ಕು ಹೊಡೆಕರಿಸಿ, ಪಶ್ಚಿಮದ ಕದವ ತೆಗೆದು, ಬಟ್ಟ ಬಯಲಲ್ಲಿ ನಿಂದು ನಾನೆತ್ತ ಹೋದೆಹೆನೆಂದರಿಯೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಮಾಣಿಕವ ಕಂಡವರು ತೋರುವರೆ ಅಯ್ಯಾ, ಮುತ್ತ ಕಂಡವರು ಅಪ್ಪಿಕೊಂಬರಲ್ಲದೆ ? ಬಿಚ್ಚಿ ಬಿಚ್ಚಿ ತೋರುವರೆ ಅಯ್ಯಾ, ಆ ಮುತ್ತಿನ ನೆಲೆಯನು, ಮಾಣಿಕದ ಬೆಲೆಯನು ? ಬಿಚ್ಚಿ ಬೇರಾಗಿ ತೋರಿ ರಕ್ಷಣೆಯ ಮಾಡಿದ ಕಾರಣದಿಂದ ಬಚ್ಚಬರಿಯ ಬೆಳಗಿನೊಳಗೋಲಾಡಿ ನಿಮ್ಮ ಪಾದದೊಳಗೆ ನಿಜಮುಕ್ತಳಾದೆನಯ್ಯಾ, ಚೆನ್ನಮಲ್ಲೇಶ್ವರ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಮನವೆಂದಡೆ ಮರವೆಗೆ ಒಳಗುಮಾಡಿತ್ತು. ತನುವೆಂದಡೆ ತಾಮಸಕ್ಕೊಳಗುಮಾಡಿತ್ತು. ಧನವೆಂದಡೆ ಆಶೆಯೆಂಬ ಪಾಶಕ್ಕೊಳಗುಮಾಡಿತ್ತು. ಇವೀಸು ಮಾಯಾಪಾಶವೆಂದು ಬಿಟ್ಟು ಹುಟ್ಟನರಿದು, ಬಟ್ಟಬಯಲಲ್ಲಿ ನಿಂದು, ಚಿತ್ತನಿರ್ಮಲನಾಗಿ ನೋಡಿ ಕಂಡ ಶರಣಂಗೆ ತನುವೆ ಗುರುವಾಯಿತ್ತು. ಮನವೆ ಘನವಾಯಿತ್ತು, ಧನವೆ ಜಂಗಮವಾಯಿತ್ತು. ಈ ತ್ರಿವಿಧವನು ತ್ರಿವಿಧಕಿತ್ತು, ತಾ ಬಯಲದೇಹಿಯಾದನಯ್ಯಾ ಆ ಮಹಾಶರಣನು. ಇದರ ನೆಲೆಯನರಿಯದೆ, ಆ ಮನದ ಬೆಂಬಳಿಗೊಂಡಾಡಿದವರೆಲ್ಲ ನರಗುರಿಗಳಾದರಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಅಯ್ಯಾ, ಏನೂ ಇಲ್ಲದ ಬಯಲ ದೇಹಕ್ಕೆ ತಾಮಸವ ಮುಂದುಮಾಡಿ, ಹೀಗೆ ಕೆಟ್ಟಿತ್ತಲ್ಲಾ ಜಗವೆಲ್ಲ. ಅದೇನು ಕಾರಣವೆಂದಡೆ, ಸುಖದ ಮುಖ ಕಂಡಿತ್ತು; ಜಗದ ರಚನೆಯ ನೋಡಿತ್ತು; ಇಚ್ಫೆಯ ಮೆಚ್ಚಿತ್ತು; ಮನವ ನಿಶ್ಚಯವ ಮಾಡದು; ಅಂಗಸುಖವ ಬಯಸಿತ್ತು; ಕಂಗಳ ಕಾಮವನೆ ಮುಂದುಮಾಡಿತ್ತು ಇದರಿಂದ ಲಿಂಗವ ಮರೆಯಿತ್ತು; ಜಂಗಮವ ತೊರೆಯಿತ್ತು. ಇದು ಕಾರಣದಿಂದ ಜಗದ ಮನುಜರು ಭವಬಂಧನಕ್ಕೊಳಗಾದರು. ಇವೆಲ್ಲವನು ಹಿಂಗಿಸಿ, ನಮ್ಮ ಶಿವಶರಣರು ಲಿಂಗದಲ್ಲಿಯೆ ಬೆರೆದರು. ಜಂಗಮಪ್ರಾಣವೆಂದು ಪಾದೋದಕ ಪ್ರಸಾದವ ಕೊಂಡು, ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ನೋಟವನಿಟ್ಟು ನೋಡುತಿರಲು ಮೂರಾಯಿತ್ತು. ಮೂರನೆ ಮೂಲಿಗನೆಂದರಿದು, ಮುದುಡ ಹರಿದು, ಸದವ ಬಡಿದು, ಪೋದರೌ, ನಿರ್ದಸಿಗೆಯ ಪಿರಿದು ಕದಳಿಯ ಕಡಿದು, ಕಂಭ ಬೇವ ಬೆಂಬಳಿವಿಡಿದು ಹೋಗುತಿರಲು, ಬೇರೆ ಕಂಡೆ. ಕಿತ್ತಿಹೆನೆಂದಡೆ ಕೀಳಬಾರದು, ನೆಟ್ಟಿಹೆನೆಂದಡೆ ನೆಡಬಾರದು. ಬಯಲಲ್ಲಿ ಬೆಳೆದ ಬೇರ ಮುಟ್ಟಿ ಹುಟ್ಟುಗೆಟ್ಟು ಹೋದೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ !
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಹೋಗುತ್ತ ಹೋಗುತ್ತ ಹೊಲಬುದಪ್ಪಿತ್ತು, ತನ್ನ ನೆಲೆಯ ತಿಳಿದಿತ್ತು. ಕತ್ತಲೆಯೊಳಗೆ ನಿಂದು ನೋಡುತ್ತಿರಲು, ನೋಟ ಹಿಂದಾಯಿತ್ತು; ಆಟವಡಗಿತ್ತು; ಮಾಟ ನಿಂದಿತ್ತು; ಬೇಟ ಬೆರಗಾಯಿತ್ತು. ಊಟವನುಂಡು ಕೂಟವ ಕೂಡಿ ಉನ್ಮನಿಯ ಬೆಳಗಿನೊಳಗೆ ಒಂದೆಂದರಿದು, ತನ್ನಂದವ ತಿಳಿದು, ಲಿಂಗದಲ್ಲಿ ಸಂದು, ಜಂಗಮದೊಳು ಬೆರೆದು, ಮಂಗಳದ ಮಹಾಬೆಳಗಿನೊಳಗೆ ಆಡುವ ಶರಣ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಅಯ್ಯಾ, ಈ ಮಹಾಘನವ ಕಾಂಬುದಕ್ಕೆ ಹಸಿವು ಕೆಡಬೇಕು; ತೃಷೆಯಡಗಬೇಕು; ವ್ಯಸನ ನಿಲ್ಲಬೇಕು; ನಿದ್ರೆ ಹರಿಯಬೇಕು; ಜೀವನ ಬುದ್ಧಿ ಹಿಂಗಬೇಕು; ಮನ ಪವನ ಬಿಂದು ಒಡಗೂಡಬೇಕು; ಚಿತ್ತ ಒತ್ತಟ್ಟಿಗೆ ಹೋಗದಿರಬೇಕು. ಹೊತ್ತು ಹೊತ್ತಿಗೆ ಉತ್ತರವನೇರಿ ಬೆಚ್ಚು ಬೇರಿಲ್ಲದೆ ಲಿಂಗದೊಳಗೆ ಅಚ್ಚೊತ್ತಿದಂತೆ ಬೆರೆದಡೆ, ಕತ್ತಲೆ ಹರಿವುದು, ಮರವೆ ಹಿಂಗುವುದು, ನಿದ್ರೆ ಹರಿವುದು, ಹಸಿವು ಕೆಡುವುದು, ತೃಷೆಯಡಗುವುದು, ವ್ಯಸನ ನಿಲುವುದು. ಇವೆಲ್ಲವನು ಹಿಂಗಿಸಿ ತಾ ಲಿಂಗವ್ಯಸನಿಯಾಗಬಲ್ಲಡೆ, ಮುಂದೆ ಮಹಾಮಂಗಳದ ಬೆಳಗು ಕಾಣಿಪುದೆಂದರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಪೃಥ್ವಿಯನೆ ಆದಿಯ ಮಾಡಿ, ಅಪ್ಪುವಿನಲ್ಲಿ ಗೋಡೆಯನಿಕ್ಕಿ, ಅಗ್ನಿಯನೆ ಅಪ್ಪುವಿನೊಳಗೆ ಹುದುಗಿಸಿ, ಅಸ್ತಿಯನೆ ಗಳುವ ಮಾಡಿ, ವಾಯುವನೆ ಬೀರಿ, ಆಕಾಶವನೆ ಹೊದಿಸಿ, ಸಹಸ್ರದಳ ಕಮಲವನೆ ಮೇಲುಕಟ್ಟ ಕಟ್ಟಿ, ಬಯಲಮಂಟಪವ ಶೃಂಗಾರವ ಮಾಡಿ, ಒಡೆಯನ ಬರವ ಹಾರುತಿದ್ದೆನಯ್ಯಾ. ಒಡೆಯನ ಬರವ ಹಾರೈಸುವ ಅವಸ್ಥೆಯನೆ ಕಂಡು, ಹಡದಪ್ಪಣ್ಣನೆ ಕರ್ಪುರದ ಸಿಂಹಾಸನವಾಗಿ ನಿಂದರು. ಅದಕ್ಕೆ ಚೆನ್ನಮಲ್ಲೇಶ್ವರನೆ ಜ್ಯೋತಿರ್ಮಯಲಿಂಗವಾಗಿ ಬಂದು ನೆಲೆಗೊಂಡರು. ಜ್ಯೋತಿರ್ಮಯಲಿಂಗವು ಕರ್ಪುರವು ಏಕವಾಗಿ ಪ್ರಜ್ವಲಿಸಿ ಪರಮಪ್ರಕಾಶವಾಯಿತ್ತು. ಈ ಬೆಳಗಿನಲ್ಲಿ ನಾ ನಿಜಮುಕ್ತಳಾದೆನಯ್ಯಾ ಚೆನ್ನಮಲ್ಲೇಶ್ವರ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಮೂಲಪ್ರಣವವನರಿದು ಮೂಲಮಂತ್ರದೊಳಗಾಡುತ್ತ, ಮುಂದನರಿದು, ಹಿಂದ ಹರಿದು, ಸಂದು ಸಂಶಯವಿಲ್ಲದೆ, ಸ್ವಯವ ನೋಡುತ್ತ, ಪರವ ಕೂಡುತ್ತ, ಶಬ್ದವ ಕೇಳುತ್ತ, ನಿರ್ಧರವಾಗಿ ನಿರ್ಬುದ್ಧಿಯಲ್ಲಿ ನಿರಾಳವನೊಡಗೂಡಿ, ನಿಜದಲ್ಲಿ ಆನಂದಾಮೃತವ ಆರೋಗಣೆಯ ಮಾಡುವ ಪರಿಯೆಂತೆಂದಡೆ; ಬೇಯದ ಬೆಂಕಿಯಲಿ ಬೆಂದು, ಕಾಯದ ಅಗ್ಗವಣಿಯಲಿ ಅಡಿಗೆಯ ಮಾಡಿ, ಕಂದಲೊಡೆದು ಒಂದಾಗಿ ಉಂಡು, ಮಂಡೆಯಲ್ಲಿ ನಿಂದು, ಮಡದಿಯ ಸಂಗವ ಮಾಡಿ, ಮಾರುತನ ನಿಲಿಸಿ, ಮದನನ ಮರ್ದಿಸಿ, ನಿರ್ಧರವಾಗಿ ನಿಂದ ಶರಣ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ತನುವೆಂಬ ಹುತ್ತದಲ್ಲಿ ಮನವೆಂಬ ಸರ್ಪ ಹೆಡೆಯನುಡುಗಿಕೊಂಡಿರಲು ಜ್ಞಾನಶಕ್ತಿ ಬಂದು ಎಬ್ಬಿಸಲು, ಉರಿ ಭುಗಿಲೆನುತ್ತ ಹೆಡೆಯನೆತ್ತಿ ಊರ್ದ್ವಕ್ಕೇರಲು, ಅಷ್ಟಮದವೆಲ್ಲ ಹಿಟ್ಟುಗುಟ್ಟಿದವು; ಕರಣಂಗಳೆಲ್ಲ ಉರಿದುಹೋದವು. ಇದ್ದ ಶಕ್ತಿಯನೆ ಕಂಡು, ಮನ ನಿಶ್ಚಯವಾದುದನೆ ನೋಡಿ, ಪಶ್ಚಿಮದ ಕದವ ತೆಗೆದು, ಬಟ್ಟಬಯಲ ಬೆಳಗಿನೊಳಗೆ ಓಲಾಡಿ ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಮದ ಮತ್ಸರ ಬಿಡದು, ಮನದ ಕನಲು ನಿಲ್ಲದು, ಒಡಲಗುಣ ಹಿಂಗದು. ಇವ ಮೂರನು ಬಿಡದೆ ನಡಸುವನ್ನಕ್ಕ ಘನವ ಕಾಣಬಾರದು. ಘನವ ಕಾಂಬುದಕ್ಕೆ ಮದಮತ್ಸರವನೆ ಬಿಟ್ಟು, ಮನದ ಕನಲನೆ ನಿಲಿಸಿ, ಒಡಲಗುಣ ಹಿಂಗಿ, ತಾ ಮೃಡರೂಪಾದಲ್ಲದೆ ಘನವ ಕಾಣಬಾರದೆಂದರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ತನುವ ಕರಗಿಸಿ, ಹರಿವ ಮನವ ನಿಲಿಸಿ, ಅಂಗಗುಣವ ಅಳಿದು, ಲಿಂಗಗುಣವ ನಿಲಿಸಿ, ಭಾವವಳಿದು, ಬಯಕೆ ಸವೆದು, ಮಹಾದೇವನಾದ ಶರಣರ ಜಗದ ಮಾನವರೆತ್ತ ಬಲ್ಲರು, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಹುಟ್ಟಿದ ಮನುಜರೆಲ್ಲಾ ಬಂದ ಬಟ್ಟೆಯ ನೋಡಿ ಭ್ರಮೆಗೊಂಡು ಬಳಲುತ್ತೈದಾರೆ. ಇದನರಿದು ಬಂದ ಬಟ್ಟೆಯ ಮೆಚ್ಚಿ, ಕಾಣದ ಹಾದಿಯ ಕಂಡು, ಹೋಗದ ಹಾದಿಯ ಹೋಗುತ್ತಿರಲು, ಕಾಲ ಕಾಮಾದಿಗಳು ಬಂದು ಮುಂದೆ ನಿಂದರು. ಅಷ್ಟಮದಂಗಳು ಬಂದು ಅಡ್ಡಗಟ್ಟಿದವು. ದಶವಾಯು ಬಂದು ಮುಸುಕುತಿವೆ. ಸಪ್ತವ್ಯಸನ ಬಂದು ಒತ್ತರಿಸುತಿವೆ. ಷಡುವರ್ಗ ಬಂದು ಸಮರಸವ ಮಾಡುತಿವೆ. ಕರಣಂಗಳು ಬೆಂದು ಉರಿವುತಿವೆ. ಮರವೆ ಎಂಬ ಮಾಯೆ ಬಂದು ಕಾಡುತಿವಳೆ. ತೋರುವ ತೋರಿಕೆಯೆಲ್ಲವೂ ಸುತ್ತಮೊತ್ತವಾಗಿವೆ. ಇವ ಕಂಡು ಅಂಜಿ ಅಳುಕಿ ಅಂಜನದಿಂದ ನೋಡುತ್ತಿರಲು ತನ್ನಿಂದ ತಾನಾದೆನೆಂಬ ಬಿನ್ನಾಣವ ತಿಳಿದು, ಮುನ್ನೇತರಿಂದಲಾಯಿತು, ಆಗದಂತೆ ಆಯಿತೆಂಬ ಆದಿಯನರಿದು, ಹಾದಿಯ ಹತ್ತಿ ಹೋಗಿ ಕಾಲ ಕಾಮಾದಿಗಳ ಕಡಿದು ಖಂಡಿಸಿ, ಅಷ್ಟಮದಂಗಳ ಹಿಟ್ಟುಗುಟ್ಟಿ, ದಶವಾಯುಗಳ ಹೆಸರುಗೆಡಿಸಿ, ಸಪ್ತವ್ಯಸನವ ತೊತ್ತಳದುಳಿದು, ಷಡ್ವರ್ಗವ ಸಂಹರಿಸಿ, ಕರಣಂಗಳ ಸುಟ್ಟುರುಹಿ, ಮರವೆಯೆಂಬ ಮಾಯೆಯ ಮರ್ಧಿಸಿ, ನಿರ್ಧರವಾಗಿ ನಿಂದು ಸುತ್ತ ಮೊತ್ತವಾಗಿರುವವನೆಲ್ಲ ಕಿತ್ತು ಕೆದರಿ, ಮನ ಬತ್ತಲೆಯಾಗಿ, ಭಾವವಳಿದು ನಿರ್ಭಾವದಲ್ಲಿ ಆಡುವ ಶರಣ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ದಾರಿವಿಡಿದು ಬರಲು ಮುಂದೆ ಸರೋವರವ ಕಂಡೆ. ಆ ಸರೋವರದ ಮೇಲೆ ಮಹಾಘನವ ಕಂಡೆ. ಆ ಮಹಾಘನವಿಡಿದು ಮನವ ನಿಲಿಸಿ ಕಾಯಗುಣವನುಳಿದು ಕರಣಗುಣವ ಸುಟ್ಟು, ಆಸೆಯನೆ ಅಳಿದು, ರೋಷವನೆ ನಿಲಿಸಿ, ಜಗದೀಶ್ವರನಾದ ಶರಣರ ಮರ್ತ್ಯದ ಹೇಸಿಗಳೆತ್ತಬಲ್ಲರು ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಕಾಣಬಾರದ ಕದಳಿಯಲೊಂದು ಮಾಣಿಕ ಹುಟ್ಟಿತ್ತು. ಇದಾರಿಗೂ ಕಾಣಬಾರದು. ಮಾರಿಹೆನೆಂದಡೆ ಮಾನವರಿಗೆ ಸಾಧ್ಯವಾಗದು. ಸಾವಿರಕ್ಕೆ ಬೆಲೆಯಾಯಿತ್ತು. ಆ ಬೆಲೆಯಾದ ಮಾಣಿಕ ನಮ್ಮ ಶಿವಶರಣರಿಗೆ ಸಾಧ್ಯವಾಯಿತ್ತು. ಅವರು ಆ ಮಾಣಿಕವ ಹೇಗೆ ಬೆಲೆಮಾಡಿದರೆಂದಡೆ ಕಾಣಬಾರದ ಕದಳಿಯ ಹೊಕ್ಕು, ನೂನ ಕದಳಿಯ ದಾಂಟಿ, ಜಲವ ಶೋಧಿಸಿ, ಮನವ ನಿಲಿಸಿ, ತನುವಿನೊಳಗಣ ಅನುವ ನೋಡುವನ್ನಕ್ಕ, ಮಾಣಿಕ ಸಿಕ್ಕಿತ್ತು. ಆ ಮಾಣಿಕವ ನೋಡಿದೆನೆಂದು ಜಗದ ಮನುಜರನೆ ಮರೆದು, ತಾನುತಾನಾಗಿ ಜ್ಞಾನಜ್ಯೋತಿಯ ಬೆಳಗಿನೊಳಗೋಲಾಡಿ ಸುಖಿಯಾದೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ. !
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಇನ್ನಷ್ಟು ... -->